Monday, May 31, 2010

ಹೂ ಬನ

ಈ ಹೂವ ಬನಕೆ,ಮಧು ತುಂಬಿದೆ..
ಆ ನಗುವ,ಮೊಗಕೆ,ಕಳೆ ನೀಡಿದೆ..
ಎಲ್ಲಾ,ಮೊದಲು ಕಲಿತು,ಕೊನೆಯಾಗಿದೆ..
ಯಾವ ಮಾತು,ಮುಂದೆ ಬರಲೂ,ನಾಚಿದೇ..

ಚಿಟ್ಟೆ,ಹಾರಿ ಬರಲು,ಹೂ ಅರಳಿದೆ..
ಪುಟ್ಟ,ಹೆಜ್ಜೆ ಇಡುತ,ಹಾದಿ ಸಾಗಿದೇ..
ನಲ್ಲ ಬರುವ ಸಮಯಕೆ,ಹೂ ಮೊಗ ಕೆಂಪಾಗಿದೇ..
ಆ ಮಿಲನದಲ್ಲಿ, ರವಿ ಕಳೆದಿದೆ..
ಹೊತ್ತು ಮುಳುಗಲು, ಸಮಯ ನಿಲ್ಲ ಬೇಕಿದೆ..

ಕರೆದು, ಮೆಲ್ಲ ಹೊರಳಿ,ಅಲೆದಾಡಿದೆ..
ಎಲ್ಲಾ,ಗೆಳತಿ ಭೇಟಿ ನವಿರಾಗಿದೆ..
ಇಂದೇ ಮುಗಿವ ಜೀವಕೆ,
ಸವಿಯ ಮುತ್ತ ನೀಡಿದೆ..

ಬಾಡಿ ಹೋದ ಹೂವ,ನೆನಪಾಗಿದೆ..
ನಾಳೆ ನಗುತ ಬೆಳೆವ,ಮೊಗ್ಗೆಲ್ಲಿದೇ?
ನಿನ್ನಾ ಮಧುರ ನೆನಪೇ,ಅತಿಯಾಗಿದೆ..
ಬಾ ಒಲವ ಗೆಳತಿ,ಭೇಟಿ ಬೇಕಾಗಿದೆ...
ಈ ನಗುವ ಮನಕೆ,ಪ್ರೀತಿ ಹೂವಾಗಿಯೇ,
ಬಾಳ,ಸಂಚಿಕೆಯಲಿ, ಮುಖ ಪುಟವಾಗೇ..............

ಮೊದಲ ಹನಿ

ಮೊದಲ ಮೇಘ ಹನಿ ಜಾರಿ ಬಿತ್ತು ನಿನ್ನಲ್ಲೇ,
ಬೊಗಸೆ ಕಂಗಳಲಿ ಹರಿಯುವ ಮುನ್ನ......
ಧುಮ್ಮಿಕ್ಕೋ ಜಲಪಾತಕ್ಕೆ, ಹಸಿರ ಸಿರಿ ಮೋಡಿ ,
ಕಣ್ಣ ಹನಿಗೆ, ನಿನ್ನ ರೆಪ್ಪೆಯ ಸೆಳೆತದ ಜೋಡಿ......

ನಿಂತ ಮಳೆಗೆ ಮಣ್ಣಿನ ಸಹವಾಸ,
ಕಳೆದ ಹನಿಗೆ ಒಡಲ ಸೇರುವ ಸೆರೆವಾಸ...
ಬಹು ದಿನದ ಕೊಳೆ ಕಳೆವ ಇಳೆ,
ಮಲ್ಲಿಗೆ ಹೂ ತಂದಾಗ ಕರಗುವ ಬಳೆ......

ಹೂದೋಟಕೆ ದುಂಬಿಯ ಭೇಟಿ, ನವ ವಧು ರೀತಿ,
ನಲ್ಲೆಯ ಮುಡಿಗೆ ಮಲ್ಲಿಗೆ ಪ್ರೀತಿ, ಕಣ್ಣಲ್ಲಿ ಹೊಸ ಭೀತಿ..
ತುಂಬು ಸೌಂದರ್ಯದ ನಲ್ಲೆ, ನಡೆ ನೀ ಮೆಲ್ಲಗೆ,
ಹೂ ಲತೆ ಬಳ್ಳಿ, ಇಲ್ಲೇ, ಕಳೆದೋಯ್ತಲ್ಲೇ☺

ಪ್ರೀತಿ- ರಾತ್ರಿ

ಮರೆಯುತಿರೋ ನೆನಪ ತೆಗೆದು,
ಎದೆಯ ಪುಟವ ನೋಡಬೇಡ,
ಕರಗುತಿರೋ ಕನಸ ನೆನೆದು,
ಪ್ರೀತಿಯ ಕಡೆಗಣಿಸಬೇಡ..
ಪ್ರತಿ ಪುಟದ ಒಳಗೂನಿನ್ನದೇ.
ಕಾಲ್ನಡಿಗೆಯಾ ಹೆಜ್ಜೆ ಗುರುತು..
ಅಳಿಸಲಾಗದ ಹಚ್ಚೆ ಮನದೀ..

ಆ ದಿನದ ಸಲಿಗೆಗೆ..
ಸ್ನೇಹದ ಹೊಲಿಗೆಯ ಹಾಕಿ..
ಪ್ರೀತಿಯ ಚಾದರ ಹೊಲಿದೆ..
ಈ ಮನದ ಪ್ರತಿ ಸಾಲಿನ ಕೊನೆಗೆ..
ಆರದ ದೀಪವ ಹಾಕಿ,ಚಂದಿರನ ಮೊಗ ತೊಳೆದೆ..

ಕೂಡಿಸುವ ಲೆಕ್ಕ ಇರಲಿ..
ಕಳೆಯುವ ಭಾಗ ಬೇಡ..
ನೆತ್ತಿಯ ಸೂರ್ಯ ಬರುವರೆಗೂ...

ನೆರಳ ಜಾಡೇ ಹಿಡಿದು..
ನಿನ್ನನು ಹುಡುಕಿಸಬಲ್ಲೇ..
ಕರಾಳ ರಾತ್ರಿಲೂ ಕೂಡ,
ಬೆಳಕನು ಹರಿಬಿಡಬಲ್ಲೇ..
ಎಲ್ಲಾ ಕಾವಲು ದಾಟಿ..ನಿನ್ನ ನಿವಾಸ ಬರುವವರೆಗೂ..

ಸೆರೆಯಾಗುವ ಭೀತಿಗೇ ವನವಾಸ...

ಸವಿ ನೆನಪು

ಈ ಕವನವು, ಅವಳ ಸವಿ ನೆನಪಿಗಾಗಿ,
ನವಿರಾಗಿದೆ ಪ್ರತಿ ಪದವೂ, ನನ್ನದೇನೇ..
ಪ್ರಾಸದಲ್ಲೂ,ತ್ರಾಸವಿರದೇ,ಏರಿ ಬಂದ ಅಂಬಾರಿ..
ಮೆರೆಸಿ ಬಂದೂ ಕೇಳಲಿಲ್ಲವೇ..ರಾಜ-ಸಂದೇಶವು..
ಜೀವದಾ ಈ ಪಯಣದೀ ಏಕಾಂಗಿಯಾದೇ.....................

ಪದೇ, ಪದೇ ಜಗಳವ ಆಡಿ,
ಬರೆದಿಹ ಕವಿ ಎಲ್ಲಿ..
ನೆನೆಯುತ,ಮಳೆಯಲಿ ಹಾಡಿ..
ಕುಣಿದಿಹ ಮನಸ್ಸೆಲ್ಲಿ?
ನಮ್ಮ ಕವಿತೆಯ ಸಾಲು.
ಮರೆತು ಈಗ ಹೋಯ್ತು..
ಆ ಸಾಲನೇ ನೆನೆದು..
ಮಳೆಯೂ ಬಂದು ಹೋಯ್ತು..
ನೆನೆದಾಗ ಚಳಿಯಲ್ಲಿ..
ಆ ನೆನಪೇ ಮರೆತು ಹೋಯ್ತು....

ಸವಿ ನೆನಪು

ಈ ಕವನವು, ಅವಳ ಸವಿ ನೆನಪಿಗಾಗಿ,
ನವಿರಾಗಿದೆ ಪ್ರತಿ ಪದವೂ, ನನ್ನದೇನೇ..
ಪ್ರಾಸದಲ್ಲೂ,ತ್ರಾಸವಿರದೇ,ಏರಿ ಬಂದ ಅಂಬಾರಿ..
ಮೆರೆಸಿ ಬಂದೂ ಕೇಳಲಿಲ್ಲವೇ..ರಾಜ-ಸಂದೇಶವು..
ಜೀವದಾ ಈ ಪಯಣದೀ ಏಕಾಂಗಿಯಾದೇ.....................

ಪದೇ, ಪದೇ ಜಗಳವ ಆಡಿ,
ಬರೆದಿಹ ಕವಿ ಎಲ್ಲಿ..
ನೆನೆಯುತ,ಮಳೆಯಲಿ ಹಾಡಿ..
ಕುಣಿದಿಹ ಮನಸ್ಸೆಲ್ಲಿ?
ನಮ್ಮ ಕವಿತೆಯ ಸಾಲು.
ಮರೆತು ಈಗ ಹೋಯ್ತು..
ಆ ಸಾಲನೇ ನೆನೆದು..
ಮಳೆಯೂ ಬಂದು ಹೋಯ್ತು..
ನೆನೆದಾಗ ಚಳಿಯಲ್ಲಿ..
ಆ ನೆನಪೇ ಮರೆತು ಹೋಯ್ತು....

Saturday, April 3, 2010

ಕರೆಂಟ್ ಕಟ್, ಟೈಮ್ ಫುಲ್ ಫಿಟ್...

ಬಿಜೆಪಿ ಸರ್ಕಾರ ಬಂದಾಗಿನಿಂದ ರಾಜ್ಯದ ಜನತೆಗೆ ಕೊಟ್ಟ ಕೊಡು(ತೊಗೋ)ಗೆಗಳು ಬಹಳಷ್ಟು. ಎಲ್ಲಾ ವರ್ಗದ ಜನರಿಗೂ ಒಂದೊಂದು ಕೊಡುಗೆ. ಬಡವರು, ಶ್ರೀಮಂತರು ಎಂಬ ಭೇದವೇ ಇಲ್ಲದೇ, ಎಲ್ಲರನ್ನು ಸಮಾನವಾಗಿ ಕಾಣುತ್ತಿದ್ದಾರೆ. ಮನೆಗೆ ಹೆಣ್ಣು ಮಗು ಬೇಡ ಎನ್ನುತ್ತಿದ್ದವರಿಗೆ ಭಾಗ್ಯಲಕ್ಷ್ಮಿ ಯೋಜನೆ. ಮಗು ಹುಟ್ಟಿದ ಕ್ಷಣದಿಂದ ಮನೆಯವರಿಗೆ ಖುಷಿ.ಹದಿನೆಂಟು ವರ್ಷವಾದರಂತೂ ತುಂಬ ಖುಷಿ . ಯಾಕೆಂದರೆ, ಆ ಮಗುವಿನ ಹೆಸರಿನಲ್ಲಿ ಇಟ್ಟಿರುವ ಹಣದ ಆಯಸ್ಸು ಅಂದಿಗೆ ಮುಗಿಯುತ್ತದೆ. ಇನ್ನು ಸೈಕಲ್ ಸವಾರಿ. ಓದೋ ಹೈಕಳಿಗೆ ವ್ಯಾಯಾಮದ ಜೊತೆಗೆ, ಕಲಿಕೆಗೂ ಸಹಾಯವಾಗುವ ಸಕ್ಕತ್ ಆಫರ್. ಪಾಪ, ನಮ್ಮ ಯಡಿಯೂರಪ್ಪನವರಿಗೇನೆ ಬ್ರೇಕ್ ಇಲ್ಲದ ಸೈಕಲ್ ಕೊಟ್ಟು ಬೀಳ್ಸುದ್ರು ರೆಡ್ಡಿ ಬ್ರದರ್ಸ್. ಏನ್ ಮಾಡೋದು, ಆಪರೇಶನ್ ಯಡಿಯೂರಪ್ಪ!

ರಾಜಕೀಯದವರ ಗಿಮ್ಮಿಕ್ಕುಗಳು , ಯಾವ ಮಟ್ಟಕ್ಕಿರುತ್ತವೆ ಎಂದರೆ, ಪಕ್ಕದ ತಮಿಳುನಾಡಿನ ರಾಜಕೀಯ ಮುತ್ಸದಿ ಕರುಣಾನಿಧಿ, ಜನ ಟಿವಿಯಲ್ಲಿ ತಮ್ಮ ಬಣ್ಣದ ರಂಗಿನಾಟ ನೋಡಲೆಂದು ಬಣ್ಣದ ಟಿವಿ ಹಂಚಿದರು. ಪಾಪ ಅದೇ ಟಿವಿಯಲ್ಲಿ ಕಾಮಿ ಸ್ವಾಮೀ ನಿತ್ಯಾನಂದನ ರಾಸಲೀಲೆ ನೋಡಿ ಜನ ಖುಷ್ ಆದರು. ಇನ್ನು ಅಕ್ಕ ಮಾಯಾವತಿ, ಯಾವ ಯೋಜನೆನು ಕೊಡದೆ, ತಮಗಾಗೆ ಸಕ್ಕತ್ ರೋಕ್ಕಾನ ಬಳಸಿ ಹಾರ ಮಾಡ್ಸಿ ಹಾಕ್ಕೊಂಡ್ರು. ಈ ವಿಷಯದಲ್ಲಿ ಲಾಲು ಒಂದಷ್ಟು ಒಳ್ಳೇ ಕೆಲಸಾನೆ ಮಾಡಿದ್ರು ಎನ್ನಬೇಕು. ಸದಾ ನಷ್ಟದ ಹಳಿಯಲ್ಲಿ ಎಗ್ಗಿಲ್ಲದೆ ಸಾಗುತ್ತಿದ್ದ ರೈಲ್ವೆ ಇಲಾಖೆಯನ್ನ ಲಾಭದ ಹಳಿಗೆ ತಂದಿದ್ದು ಅವರ ಹೆಗ್ಗಳಿಕೆ.

ಈಗ ಚರ್ಚಿಸಬೇಕಾದ ವಿಷಯ ಏನೆಂದರೆ ಪವರ್ ಕಟ್. ನಮ್ಮ ರಾಜಕೀಯ ನಾಯಕರ ಪವರ್ ಕಟ್ ಅಲ್ಲ ಸ್ವಾಮೀ. ಜನಸಾಮಾನ್ಯರ ದೈನಂದಿನ ಬದುಕು ನಡೆಸಲು ಅತ್ಯವಶ್ಯವಾದ ವಿದ್ಯುತ್ಚಕ್ತಿ. ಹಿಂದೆ ಕೇವಲ ಬೇಸಿಗೆ ಶುರುವಾದ ಎರಡು ತಿಂಗಳು ಇರುತ್ತ್ತಿದ್ದ ಲೋಡ್ ಶೆಡ್ಡಿಂಗ್, ಈಗ ವರ್ಷವಿಡೀ ಇರುತ್ತದೆ. ಅದಕ್ಕೂ ಕಾಲಗಳ ಅರಿವಿಲ್ಲ. ೧ ತಾಸು ಎಂದು ಶುರುವಾಗಿ, ಈಗ ೨೫ ನೆಯ ತಾಸು ಚಾಲ್ತಿಯಲ್ಲಿ ಇರಬಹುದೇನೋ ಎನ್ನುವಷ್ಟರ ಮಟ್ಟಿಗಿರುತ್ತದೆ. ಇದು ಯಾವುದೋ ಹಳ್ಳಿ, ಅಥವಾ ಪಟ್ಟಣದ ಕಥೆಯಲ್ಲ. ಉದ್ಯಾನ ನಗರಿ, ಸಿಲಿಕಾನ್ ಸಿಟಿ, ಬೆಂಗಳೂರಿನ ಕಥೆ. ಕೆಲ ವರ್ಷಗಳ ಹಿಂದೆ ಎಸ್. ಎಂ. ಕೃಷ್ಣ ಸರಕಾರವಿದ್ದಾಗ, ಹಳ್ಳಿ ಜನರ ಬೆಳಕು ಕಿತ್ತು, ಬೆಂಗಳೂರನ್ನು ಬೆಳಗಿಸುತ್ತಿದ್ದರು. ನಂತರ ಬಂದ ರೇವಣ್ಣ, ರಾವಣನಾಗಿ, ಸಣ್ಣ ಪುಟ್ಟ ನಗರಗಳತ್ತ ಕೈ ಚಾಚಿದರು. ದಿನ ಬೆಳಗಾದರೆ, ಪತ್ರಕರ್ತರ ಏಕೈಕ ಪ್ರಶ್ನೆ, ಎಂದಿನಿಂದ ಲೋಡ್ ಶೆಡ್ಡಿಂಗ್. ಕೆಲ ದಿನ ಅವರೂ ಇಲ್ಲ, ನಮ್ಮ ಬಳಿ ಪವರ್ (?) ಇದೆ. ಯಾವುದೇ ಲೋಡ್ ಶೆಡ್ಡಿಂಗ್ ಇಲ್ಲ ಎಂದು ಸಾಗಹಾಕುತ್ತಿದ್ದರು. ಎಷ್ಟು ದಿನ ತಡೆದಾರು. ನಂತರ ಹಂತ ಹಂತವಾಗಿ ತಮ್ಮ ಕದಂಬ ಬಾಹು(ಗಳು) ವನ್ನು ಚಾಚುತ್ತ ಬಂದರು. ಇಷ್ಟಾದರೂ ಕೂಡ ಬೆಂಗಳೂರು ಬೆಚ್ಚಿರಲಿಲ್ಲ. ಯಾಕೆಂದರೆ, ಅದು ಒಂದು ರೀತಿ ಇಂದ್ರನ ಹಾಗೆ.ಸದಾ ವಿಲಾಸಿ ಜೀವನ.

ವಚನ ಭ್ರಷ್ಟ ಕುಮಾರಣ್ಣನ ಅವಧಿಯಲ್ಲೂ ಇದರ ಮುಂದುವರಿದ ಭಾಗ. ಗ್ರಾಮ ವಾಸ್ತವ್ಯ ಮಾಡಿದಾಗ ಆ ಹಳ್ಳಿಗೆ ಬೆಳಕು. ತದನಂತರ ಬಂದ ಯಡಿಯೂರಪ್ಪ, ಚುನಾವಣೆಯಲ್ಲಿ ಕೊಟ್ಟಿದ ಭರವಸೆಯಲ್ಲಿ ಪ್ರಮುಖವಾದ ೨೪ ತಾಸು ಎಲ್ಲ ಹಳ್ಳಿಗಳಿಗೂ ವಿದ್ಯುತ್ ಎಂಬ ಅಂಗೈ ಅರಮನೆ ಕಟ್ಟಲೇ ಇಲ್ಲ. ಬದಲಿಗೆ ಬರೀ ಕತ್ತಲೇ. ಇಲ್ಲಿಯವರೆಗೂ, ಹಳ್ಳಿ ಪಟ್ಟಣದ ಬೆಳಕು ಆರಿಸಿದ್ದವರನ್ನೂ ಮೀರಿಸಿ, ಬೆಂಗಳೂರಿಗೂ ತಮ್ಮ ಕಮಲವನ್ನು ಮುಡಿಸಿದರು. ಹಂತ ಹಂತವಾಗಿ ರಾಜ್ಯ ಕತ್ತಲೆಯಲ್ಲಿ ಮುಳುಗಲು ಶುರುವಾಯ್ತು.ಇಷ್ಟೆಲ್ಲಾ ಕಷ್ಟದ ಪರಿಸ್ಥಿತಿ ಇದ್ದರೂ, ಬೆಂಗಳೂರಿನಲ್ಲಿ ಹೊನಲು-ಬೆಳಕಿನ ಕ್ರಿಕೆಟ್ ಪಂದ್ಯ ಆಡಿಸಿದರು. ಹಲವು ಜನರಿಗೆ ತಿಳಿದಿಲ್ಲ. ಇಲ್ಲಿ ಬಳಸುವ ದೀಪಗಳು, ಹೆಚ್ಚಿನ ವಿದ್ಯುತ್ ಬಳಸುತ್ತವೆ ಎಂದು. ಒಂದು ಪಂದ್ಯಕ್ಕೆ ಉರಿಸುವ ಈ ದೀಪಗಳು, ಎಷ್ಟೋ ಹಳ್ಳಿಗಳನ್ನು ಹಲವಾರು ದಿನಗಳು ಬೆಳಗಬಲ್ಲದು. ರೈತನ ಪಂಪ್ ಸೆಟ್ಟಿಗೆ ಸಿಂಗಲ್ ಫೇಸ್ ವಿದ್ಯುತ್ ನೀಡಲಾಗದವರು , ಕೆಲವು ಜನರ ತೆವಲಿಗೆ ಈ ಅಮೂಲ್ಯ ಇಂಧನ ಹಾಳುಗೆಡವುತ್ತಿದ್ದಾರೆ. ತಮ್ಮ ಮುಂದಿನ ಭವಿಷ್ಯಕೆ ನಾಂದಿ ಹಾಡುವ ಎಸ್. ಎಸ್. ಎಲ್.ಸಿ ಪರೀಕ್ಷೆಗೆ ಓದುವ ಮಕ್ಕಳಿಗೆ ಕ್ಯಾಂಡಲ್ ಇಟ್ಟು, ನೀವು ವಿಶ್ವೇಶ್ವರಯ್ಯ ಆಗುತ್ತೀರಿ ಎಂದು ಗಿಂಜುತ್ತಾರೆ.

ಇಷ್ಟೆಲ್ಲಾ ಸಮಸ್ಯೆ ತಂದೊಡ್ಡಿದ ಪವರ್ ಕಟ್ , ನಮಗೆ ತಿಳಿಯದೆ ಕೆಲವೊಂದು ಅಮೂಲಾಗ್ರ ಬದಲಾವಣೆ ತಂದಿದೆ. ಎಲ್ಲ ಸರಿಯಾಗಿದ್ದ ಸಮಯದಲ್ಲಿ, ನಿತ್ಯ ಕರ್ಮ ಮುಗುಸುವುದರಿಂದ ಹಿಡಿದು, ಓಡಾಡುವ ಕೂಸು, ನಮ್ಮ ಮೊಬೈಲ್ ಬ್ಯಾಟರಿ ಛಾರ್ಜೆ ಆಗುವ ತನಕ ನಮ್ಮಲ್ಲಿ ಒಂದು ಶಿಸ್ತು ಕಲಿಸಿದೆ. ಹಿಂದೆ, ಏಳುವ ಸಮಯದಿಂದ ಹಿಡಿದು, ಸೋಮಾರಿತನ ನಮ್ಮಲ್ಲಿ ಆವರಿಸಿತ್ತು. ಈಗ ಏಳದೆ ಹೋದರೆ ವಿಧಿಯಿಲ್ಲ. ಬಿಸಿ ನೀರಿಗಾಗಿ ಬಾಯ್ಲರ್, ಬಟ್ಟೆಗೆ ಇಸ್ತ್ರಿ, ಅಡಿಗೆಗೆ ಮಿಕ್ಸಿ, ಎಲ್ಲವೂ ಪ್ರತಿದಿನ ನಮ್ಮ ಜೀವನ ಆರಾಮವಾಗಿ ನಡೆಸಲು ಇರುವ ವಸ್ತುಗಳು.ಆದರೆ ಇವನ್ನು ಉಪಯೋಗಕ್ಕಿಂತ, ದುರುಪಯೋಗ ಮಾಡಿದ್ದೇ ಹೆಚ್ಚು. ಬೇಡವೆಂದರೂ ಹೆಚ್ಚಾಗಿ ನೀರು ಕಾಯಿಸಿವುದು, ಇಸ್ತ್ರಿ ಪೆಟ್ಟಿಗೆ ಆನ್ ಮಾಡಿ, ಮೊಬೈಲ್ನಲ್ಲಿ ಮಾತಾಡುತ್ತ ಊರೆಲ್ಲ ಅಲೆದು ಬರುವುದು, ಮಿಕ್ಸಿ ಉರಿಸಿ ಪಕ್ಕದ ಮನೆ ಜಗಳ ನೋಡುವ ಕುತೂಹಲ, ಇವೆಲ್ಲಕ್ಕೂ ಈಗ ಕಡಿವಾಣ ಬಿದ್ದಿದೆ. ನಮ್ಮಲ್ಲಿ ಮಿತ ಬಳಕೆಯ ಒಂದು ಜಾಗೃತಿ ತರಿಸಿದೆ. ಇಂದು ವ್ಯರ್ಥ ಮಾಡಿದರೆ, ನಾಳೆ ನಮಗೇ ಇಲ್ಲವೆಂಬ ಸಾಮಾನ್ಯ ಜ್ಞಾನ ಕೆಲವರಲ್ಲಾದರೂ ಬಂದಿದೆ. ಸೋಮಾರಿತನಕ್ಕೆ ಚಾಟಿ ಏಟು ಕೊಟ್ಟು, ನಮ್ಮಿಂದ ಕೆಲಸ ತೆಗೆಸಿದೆ.

ಈ ಸಮಸ್ಯೆಗೆ ಖಂಡಿತ ಪರಿಹಾರವಿದೆ. ಚುನಾವಣೆಗೂ ಮೊದಲು , ಗುಜರಾತ್ ಮಾದರಿ ಸರ್ಕಾರ ಎನ್ನುತ್ತಿದ್ದ ಬಿ.ಜೆ.ಪಿ, ಅದನ್ನು ಯಾವ ಅರ್ಥದಲ್ಲಿ ಹೇಳಿತ್ತೋ ದೇವರೇ ಬಲ್ಲ. ಬರೀ ಅಭಿವೃದ್ದಿ ಮಾಡಿದ್ದೇವೆ ಎಂದು ಬೊಗಳೆ ಬಿಡುವ ಬದಲು, ನಿಜವಾದ ಅಭಿವೃದ್ದಿ ಎಂದರೆ ಏನೆಂದು ತಿಳಿಯಬೇಕು. ಈಗ್ಗೆ ಕೆಲವು ವರ್ಷಗಳ ಹಿಂದೆ ಭೂಕಂಪವಾದಾಗ ಗುಜರಾತ್ ಪರಿಸ್ಥಿತಿ ಏನೂ ಈಗಿನ ಕರ್ನಾಟಕಕ್ಕಿಂತ ಭಿನ್ನವಾಗಿರಲಿಲ್ಲ. ಇಡೀ ಅಹಮದಾಬಾದ್ ನಗರವನ್ನು ಪ್ರತಿ ರಾತ್ರಿ ಬೆಳಗುವುದು ಸೋಲಾರ್ ದೀಪವೇ ಹೊರತು, ವಿದ್ಯುತ್ ದೀಪವಲ್ಲ. ಬರೀ ಬೆಂಗಳೂರನ್ನು ಈ ರೀತಿ ಪರಿವರ್ತಿಸಿದರೆ ಸಾಕು, ಅದೆಷ್ಟೋ ದಶಲಕ್ಷ ಯುನಿಟ್ ವಿದ್ಯುತ್ ಉಳಿತಾಯವಾಗುತ್ತದೆ. ನಗರದ ಯಾವುದೇ ಬೀದಿಗೆ ಹೋದರು, ಮಧ್ಯಾನವಾದರೂ ಆರದ ಬೀದಿ ದೀಪಗಳ ಸಾಲೇ ಸಿಗುತ್ತದೆ. ಇವೆಲ್ಲವುಗಳಲ್ಲಿ ಸ್ವಯಂ ಚಾಲಿತ ಸ್ವಿಚ್ ಅಳವಡಿಸಿದರೆ ಅವಶ್ಯವಿದ್ದಾಗ ಮಾತ್ರ ಬೀದಿ ದೀಪ ಬೆಳಗುತ್ತದೆ. ಇವತ್ತಿನ ದಿನ, ಬೆಂಗಳೂರು ಕೇವಲ ಒಂದು ಮಹಾನಗರವಾಗಿರದೆ, ಬೃಹತ್ ರೀತಿಯಲ್ಲಿ ಬೆಳೆದು ನಿಂತಿದೆ. ಹಲವಾರು ಜನರ ಬದುಕಿಗೆ ಒಡಲಾಗಿ ನಿಂತಿದೆ.ಇಲ್ಲಿ ದುಡಿಯುವ ಕೈಗಳಿಂದ ಹಳ್ಳಿಯ, ಪಟ್ಟಣದ ಎಷ್ಟೋ ಜನರ ಹೊಟ್ಟೆ ತುಂಬುತ್ತಿದೆ. ಕಾಮಧೇನುವಾಗಿ ಬಂದವರನ್ನೆಲ್ಲಾ ತನ್ನ ಒಡಲೊಳಗೆ ಇಟ್ಟು ಪೋಷಿಸುತ್ತಿದೆ.ಹಾಗಂದ ಮಾತ್ರಕ್ಕೆ, ಮುಂದೆಯೂ ಹೀಗೆ ಇರುತ್ತದೆನ್ನುವುದು ಮೂರ್ಖತನ. ಪರಿಸ್ಥಿತಿ ಹೀಗೆ ಮುಂದುವರಿದರೆ, ಖಂಡಿತವಾಗಿ ಬೆಂಗಳೂರಿಗೆ ಯಾವುದೇ ಉದ್ಯಮಿ ಬರಲು ಇಚ್ಚಿಸುವುದಿಲ್ಲ. ಕೇವಲ ಒಂದು ವೀಡಿಯೊ ಕಾನ್ಫೆರೆನ್ಸ್ ನಿಂದ ಹೂಡಿಕೆದಾರರನ್ನು ಸೆಳೆಯುವ ಮೋದಿ ನಿಮಗೆ ಮಾದರಿಯಾಗಲಿ. ನ್ಯಾನೊ ಕಾರಿನ ಘಟಕ ಸ್ಥಾಪನೆಯಲ್ಲಿ ಆದ ಅನುಭವದಿಂದ ಬುದ್ಧಿ ಕಲಿಯಬೇಕು.ಯೋಜನೆ ಕರ್ನಾಟಕದ ಕೈ ತಪ್ಪಲು, ಪ್ರಮುಖ ಕಾರಣ ವಿದ್ಯುತ್. ಯಾವುದೇ ಉದ್ಯಮಿ ಸದಾಕಾಲ ಡೀಸಲ್ ಬಳಸಿ ತನ್ನ ಸಂಸ್ಥೆ ನಡೆಸಲು ಇಚ್ಚಿಸುವುದಿಲ್ಲ. ಇತ್ತೀಚಿಗೆ ಮಾನ್ಯ ಮುಖ್ಯಮಂತ್ರಿಗಳು ಮುಂಬೈನಲ್ಲಿ ಹೂಡಿಕೆದಾರರ ಸಮ್ಮೇಳನ ನಡೆಸಿ ಮಿಂಚಿದ್ದಾರೆ. ಇದು ಸ್ವಾಗತಾರ್ಹ ಬೆಳವಣಿಗೆ. ಮೂಲಭೂತ ಸೌಕರ್ಯಕ್ಕೆ ಯಾವುದೇ ಕೊರತೆ ಇಲ್ಲ ಎಂದು ಹೇಳಿದ್ದೀರ. ಆದರೆ, ನೀವು ಕೊಟ್ಟ ಮಾತು ಉಳಿಸಿಕೊಳ್ಳುವಿರೆಂದು ರಾಜ್ಯದ ಜನತೆಗೆ ಅನುಮಾನ. ಒಂದಂತೂ ನಿಜ. ಪರಿಸ್ಥಿತಿ ಹೀಗೆ ಮುಂದುವರಿದರೆ, ಕರ್ನಾಟಕ ಗುಜರಾತ್ ಮದರಿಯಲ್ಲಾ, ಬಿಹಾರ ಮಾದರಿಯಾದೀತು. ಹೊಸ ಹೂಡಿಕೆದಾರರ ಬದಲು, ಇರುವ ಗಳಿಕೆಯನ್ನೂ ಕಳೆದುಕೊಳ್ಳಬೇಕಾಗಬಹುದು. ಆಗ ವಚನಭ್ರಷ್ಟರೆಂದು ಯಾರನ್ನು ಹಳಿದು, ಅಧಿಕಾರಕ್ಕೆ ಬಂದಿರೋ, ಅವರ ಗತಿಯೇ ನಿಮಗೂ ಕೂಡ. ಮುಂದಿನ ವರುಷಕ್ಕಾದರೂ ಕರ್ನಾಟಕ ಬೆಳಗಲಿ..

ಪ್ಲೀಸ್ ಉತ್ತರಿಸಿ..ಯಡಿಯೂರಪ್ಪ & ಈಶ್ವರಪ್ಪ.


ಗಣೇಶ್ ಕಿರಣ್, ಮೈಸೂರು

Saturday, February 27, 2010

ವಾಸ್ತವ-ಭಾಗ 2



ಆ ವರ್ಷದ ಪದವಿ ಪರೀಕ್ಷೆ ಮುಗಿದು, ಫಲಿತಾಂಶ ಹೊರಬಿದ್ದಿತ್ತು. ಮನೋಹರ ಉತ್ತಮ ಎನ್ನದಿದ್ದರೂ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದ.ಸಹನಾ ಹತ್ತು ಅಂಕಗಳಿಂದ ದ್ವಿತೀಯ ದರ್ಜೆ ಪಡೆದಿದ್ದಳು.

ರಾಮರಾಯರು ವೃತ್ತಿಯಲ್ಲಿ ಮೇಷ್ಟ್ರಾದರ್ರೂ , ಮಕ್ಕಳ ಫಲಿತಾಂಶಕೆ ಎಂದೂ ಖುಷಿ ಅಥವಾ ಬೇಜಾರುಪಟ್ಟವರೇ ಅಲ್ಲಾ. ಇಬ್ಬರಿಗೂ ಒಂದೇ ಉತ್ತರ."ಸಂತೋಷ ಆಯ್ತು".ದೇವರು ಒಳ್ಳೆಯದು ಮಾಡಲಿ.



*********************************************************************************************************************************************************



ಮನೋಹರ ಅದಾಗಲೆ, ಕೆಲಸಕ್ಕೆ ಸೇರಬೆಕೆಂದು ನಿರ್ಧರಿಸಿಬಿಟ್ಟಿದ್ದ.ಇವನಂತೆ,ರಾಮರಾಯ ದಂಪತಿಗಳೂ, ಮಗನನ್ನು ಪರ ಊರಿಗೆ ಯಾವುದೇ ಕಾರಣಕ್ಕೂ ಕಳುಹಿಸಬಾರದು ಎಂದು ನಿರ್ಧರಿಸಿದ್ದರು.

ಕೆಲದಿನಗಳ ನಂತರ, ಮನೋಹರ ,ಉದ್ಯಾನ ನಗರಿ ಬೆಂಗಳೂರಿನಲ್ಲಿ ಕೆಲಸ ಹುಡುಕಲು ಶುರುಮಾಡಿದ್ದ. ಮನೆಯ ಅರ್ಥಿಕ ಪರಿಸ್ಥಿತಿಯನ್ನು ಚೆನ್ನಾಗಿ ಬಲ್ಲವನಾದ್ದರಿಂದ, ಮತ್ತಷ್ಟು ದಿನ ಮಾತಾಪಿತರ ಆರ್ಥಿಕ ಹೊರೆ ಹೆಚ್ಹಿಸಲು ಇಷ್ಟವಿರಲ್ಲಿಲ್ಲ. ಇವೆಲ್ಲದರ ಮಧ್ಯೆ ಸಹನಾಳ ಹುಡುಗಾಟಿಗೆ ಬುದ್ಧಿ ಅರಿತವನಾಗಿದ್ದ.ಏನಾದರೂ ಉದ್ಯೋಗ ಮಾಡಲೇ ಬೇಕೆಂದು ಧೃಢ ನಿಶ್ಚಯದಲ್ಲಿದ್ದ.ಈ ಎಲ್ಲಾ ಜವಾಬ್ದಾರಿಯೊಂದಿಗೆ, ಮೈಸೂರಿನ ಜೊತೆ ಒಂದು ರೀತಿಯ ಮಧುರವಾದ ಅನುಭವವಿದೆ. ಮನಸ್ಸಿಗೆ ಎಷ್ಟೇ ಬೇಸರವಾದರೂ, ಗಂಗೋತ್ರಿಯ ಶಾಂತ ಪರಿಸರದಲ್ಲಿ ಒಂದು ವಿಹಾರ, ಮನಸನ್ನು ತಿಳಿಯಾಗಿಸುತ್ತಿತ್ತು.



ಕೆಲ ದಿನಗಳ ಹಿಂದೆ, ಕಾಲೇಜಿನಲ್ಲಿ ಕೊನೆಯ ವರ್ಷವಾದ್ದರಿಂದ ೨ ದಿನಗಳ ಪ್ರವಾಸ ಹೊರಡಲು ನಿಗದಿಯಾಗಿತ್ತು. ಶಿಕ್ಷಕ ವರ್ಗದಲ್ಲಿ ಸಭ್ಯ ಹುಡುಗನೆಂಬ ಖ್ಯಾತಿ ಇದ್ದರಿಂದ, ಮನುವಿಗೆ ಪ್ರವಾಸದ ಉಸ್ತುವಾರಿ ವಹಿಸಿದ್ದರು.ಯಾವುದೇ ಕೆಲಸವಾದರೂ ಅಚ್ಚುಕಟ್ಟಾಗಿ ಮಾಡುವ ಗುಣ ರಾಮರಾಯರಿಂದ ಹುಟ್ಟಿನಿಂದಲೇ ಬಂದಿತ್ತು. ಹೀಗಾಗಿ ಯಾರದೇ ಮನೆ ಮಂಗಳ ಕಾರ್ಯವಾದರೂ ಇಲ್ಲ ಎನ್ನದೇ ಉತ್ಸುಕತೆಯಿಂದ ಮಾಡುತ್ತಿದ್ದ. ಕೊನೆ ಮನೆಯ ಪರಮೇಶಿ ಅವನ ಅಕ್ಕನ ಮದುವೆ ಸಮಯದಲ್ಲಿ ಜವಾಬ್ದಾರಿ ಹೊರುವವರಿಲ್ಲದೇ ಪರಿತಪಿಸುತ್ತಿದ್ದಾಗ ಮನೆ ಮಗನಂತೆ ಎಲ್ಲಾ ಕೆಲಸ ಮಾಡಿದ್ದ. ಆದರೆ ಕೊನೆಯಲ್ಲಿ, ಹೊರಡುವಾಗ ಬೀಗರ ಕಳುಹಿಸಲು ಬರಬೇಕಿದ್ದ ಬಸ್ ಎರಡು ತಾಸು ತಡವಾಗಿದ್ದಕ್ಕೆ ಇವನ ಮೇಲೆ ಎಲ್ಲರೆದುರು ಕೂಗಡಿದ್ದ. ಮನಸು ಕದಡಿತ್ತು.ತನ್ನದಲ್ಲದ ತಪ್ಪಿಗೆ ಅಪರಾಧಿ ಸ್ಥಾನದಲ್ಲಿ ನಿಂತಿದ್ದ.



ಮದುವೆಗೆ ಮೊದಲಿನಿಂದ ಹಿಡಿದು, ಕೊನೆಯವರೆಗೂ ಕಾಯಿಸುವ ಗಂಡಿನ ಮನೆಯವರು, ಹೊರಡುವ ಸಮಯದಲ್ಲಿ ಸಂಯಮವಿಲ್ಲದೆ ಮಾತಾಡಿದ್ದರು. "ನಮ್ಮ ಕಡೆಯವರೇ ಇದ್ದರು. ಅವರಿಗೇ ಹೇಳಿದ್ದರೆ ಬರುತ್ತಿದ್ದರು" ಎನ್ನುವ ಒಕ್ಕಣೆ ಬೇರೇ. ನಿಜ ವಿಷಯವೇನೆಂದರೆ, ಬರುವಾಗಲೂ ಮನುವೇ ವಾಹನದ ಏರ್ಪಾಟು ಮಾಡಿದ್ದುದು. ಕೊನೆಗೂ ಬಸ್ ಬಂದಾಗ, ಎಲ್ಲರ ಗಮನ ಹೊರಡುವ ಕಡೆಗೆ.

ಮುದುಡಿದ ಮನಸಿಗೆ ತಂಪೆರಿದಿದ್ದು, ಅದೇ ಗಂಗೋತ್ರಿಯ ಮರದ ನೆರಳು, ನೈದಿಲೆ ಹಕ್ಕಿಯ ಕೂಗು, ಸಂಪಿಗೆ ಹೂ ಪರಿಮಳ.



**************************************************************************************************************************************************************

ಮನೆಯಲಿ ಬಿಗುವಿನ ವಾತಾವರಣ ಕಂಡು ಸಹನಾ ಹೆದರಿದ್ದಳು.ಬೀದಿ ಕೊನೆಯವರೆಗೂ ಜೊತೆಯಾಗಿ ಬಂದು ಬೀಳ್ಕೊಟ್ಟ ಸತೀಶನ್ನ ನೋಡಿ ಕೋಪಗೊಂಡಿದ್ದಾರೆಂದು ಮನದಲ್ಲಿ ಅಳುಕು. ಮತ್ತೊಂದೆಡೇ ಕೇಳಿದರೆ, ಜೊತೆಯಾಗಿ ಬಂದರೆ ತಪ್ಪೇನು ಎಂದು ವಾದಿಸುವ ಮನಸ್ಸು.



ವಾಸ್ತವವಾಗಿ, ಮನುವಿಗೆ, ಬೆಂಗಳೂರಿನಲ್ಲಿ, ಮೂರುವರೆ ಸಾವಿರ ರೂಪಾಯಿ ಮಾಸಿಕ ವರಮಾನದ ಒಂದು ನೌಕರಿ ದೊರಕಿತ್ತು. ಇವನ ಪರಿಸ್ಥಿತಿ ಬಲ್ಲ ಕಾಲೇಜಿನ ಅಕೌಂಟ್ಸ್ ವಿಭಾಗದ ತಿಪ್ಪೇಸ್ವಾಮಿ, ಬೆಂಗಳೂರಿನ ತಮ್ಮ ಪರಿಚಯಸ್ಥರಿಗೆ ಹೇಳಿ ಈ ನೌಕರಿ ಕೊಡಿಸಿದ್ದರು. ಹರಿಹರದ ಕಡೆಯವರು. ಕಷ್ಟ-ಸುಖ ಬಲ್ಲವರು.ಹಾಗಾಗಿ ಸಹಾಯ ಮಾದಿದ್ದರು.ತುಂಬಾ ಚಿಕ್ಕದಲ್ಲದಿದ್ದರೂ, ತಕ್ಕಮಟ್ಟಿಗಿದ್ದ ಕಂಪನಿ. ಕಾಮರ್ಸ್ ಓದಿದ್ದ ಮನುವಿಗೆ ಅಕೌಂಟ್ಸ್ ವಿಭಾಗದಲ್ಲಿ ಸಹಾಯಕನಾಗಿ ನೌಕರಿ ದೊರಕಿತ್ತು.



ರಾಮರಾಯರದು ಒಂದೇ ತಗಾದೆ. ನೀನು ಕೆಲಸ ಮಾಡಲೇ ಬೇಕೆಂದರೆ, ಮೈಸೂರಿನಲ್ಲೇ, ಯಾವುದಾದರೂ ಕೆಲಸ ಹುಡುಕು.ಎಲ್ಲೋ ದೂರದಲ್ಲಿ ಹೋಗಿ ಕಷ್ಟಪಡುವುದಕ್ಕಿಂತ ಕಣ್ಣೆದುರೇ ಇರು ಎಂಬ ಬುದ್ಧಿ ಮಾತಿನ ರೂಪದ ಆಜ್ಞೆ. ಗಂಡನ ಮಾತಿಗೆ ಶಾರದಮ್ಮನವರ ಸಂಪೂರ್ಣ ಸಮ್ಮತಿ.ಮಗ ಮನೆಯಲ್ಲೇ ಇದ್ದರೆ, ಚೆನ್ನಾಗಿ ಊಟ, ತಿಂಡಿ ಮಾಡಿ, ಅವನ್ನನ್ನು ಸಂತೃಪ್ತಿಪಡಿಸಬಹುದು ಎಂಬ ಮಾತೃ ಪ್ರೀತಿ.



ಆದರೆ, ಮನುವಿನದು ಒಂದೇ ಹಠ. ನನ್ನ ಜೊತೆಗೆ ಸ್ನೇಹಿತರಿದ್ದಾರೆ. ಜೊತೆಯಾಗಿ ಸೇರಿ ಯಾವುದಾದರೂ, ರೂಮು ಬಾಡಿಗೆಗೆ ಹಿಡಿಯುತ್ತೇವೆ. ಅನ್ನ ಒಂದು ಮಾಡಿದರೆ, ಹೋಟೆಲಿಂದ ಸಾಂಬಾರ್ ತಂದರೆ ಕಥೆ ಕಳೆಯುತ್ತದೆ ಎನ್ನುವ ಸಮಜಾಯಿಷಿ.ಅಲ್ಲದೇ, ಬೆಂಗಳೂರು ವಿಶಾಲವಾಗಿದೆ.ಒಂದಲ್ಲ ಒಂದು ಎಂದು ಬಹುರಾಷ್ತ್ರೀಯ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಬಹುದು. ಮುಂದಿನ ಭವಿಷ್ಯಕೆ ಒಳ್ಳೆಯದಾಗುತ್ತದೆನ್ನುವ ತುಡಿತ ಅವನದು.



ಬೆಂಗಳೂರೆಂಬ ಬೆಂಗಳೂರೇ ಅಂಥಹುದು. ಮಾಯನಗರಿ.ಎಲ್ಲರನ್ನು ತನ್ನ ಒಡಲೊಳಗೆ ಇರಿಸಿಕೊಳ್ಳುವ ವಿಶಾಲ ಮನಸ್ಸು.ಯಾರನ್ನೂ ಬರಬೇಡಿ ಎನ್ನದ ಕಾಮಧೇನು. ಹಾಗಾಗಿ ಮನುವನ್ನೂ ಆಕರ್ಷಿಸಿದ್ದು ಅದೇ ಬಣ್ಣದ ಬದುಕು. ಕೊನೆಗೂ ಮನೆಯಲ್ಲಿ ಒಪ್ಪಿಗೆ ದೊರೆತ ಮೇಲೆ ಮನದಲ್ಲಿ ಒಂದು ರೀತಿ ಶಾಂತತೆ. ಎಷ್ಟೇ ಕಾರಣಗಳಿದ್ದರೂ, ಮೈಸೂರನ್ನು ತೊರೆಯುವುದು ಬಹಳ ಬೇಸರಪಡಿಸಿತ್ತು. ಇಲ್ಲಿಯ ಶಾಂತತೆ, ತಿಳಿ ಗಾಳಿ, ಎಲ್ಲಿಂದ ಎಲ್ಲಿಗೆ ಬೇಕಾದರೂ ನಡೇದೇ ಹೋಗಬಹುದಾದಷ್ಟು ಪುಟ್ಟ ನಗರಿ. ಒಂದು ರೀತಿಯ ಪ್ರೇಯಸಿಯ ಹಾಗೆ. ದೂರವಿದ್ದರೂ ಸನಿಹದಂತೆ.ಈ ಎಲ್ಲದರ ಮಧ್ಯೆ, ಸಹನಾಳು "ನನ್ನ ಬಿಟ್ಟು ಹೋಗ್ಬೇಡ್ವೋ" ಎಂದು ಹೇಳಿದ್ದಳು. ಮನೆಯಲ್ಲಿ ಇದ್ದಾಗ ಕಿತ್ತಾಡುತಿದ್ದವರು, ಈಗ ದೂರದೂರಿಗೆ ಹೊರಟಾಗ ಒಬ್ಬರನ್ನೊಬ್ಬರು ಬಿಡದಷ್ಟು ಬೆಸುಗೆ ಹಾಕಿತ್ತು.

**************************************************************************************************************************************************************

ಆಂದು ಬೆಳಗಿನ ರೈಲಿಗೆ ಹೊರಡಲು, ಮನು ತಯಾರಾಗುತ್ತಿದ್ದ.ಒಂದು ಕಡೆ ಸಂತೋಷವಿದ್ದರೂ ಮೈಸೂರು ಬಿಡುತ್ತಿದ್ದೇನಲ್ಲಾ ಎಂಬ ಬೇಸರ. ಒಮ್ಮೊಮ್ಮೆ ಬೇಡ, ಇಲ್ಲೇ ಇರೋಣ ಅನ್ನಿಸಿತ್ತಾದ್ದರೂ, ಕೊನೆಗೆ ಅದು ಸರಿಯಾದ ನಿರ್ಧಾರ ಅಲ್ಲವೆಂದು, ಹೊರಟಿದ್ದ. ಶಾರದಮ್ಮನವರು, ಅದು ತೆಗೆದು ಕೊಂಡೆಯೇನೋ, ಇದು ತೆಗೆದು ಕೊಂಡೆಯೇನೋ ಎಂದು ಪದೇ ಪದೇ ನೆನಪಿಸುತ್ತಿದ್ದರು. ರಾಮರಯರು ನಿಲ್ದಾಣಕ್ಕೆ ಬರಲು ಕೊಡೆ ಹುಡುಕುತ್ತಿದ್ದರು. ಯಾವಾಗಲೂ ಬಿಳಿ ಶುಭ್ರ ಪಂಚೆ, ಕರಿ ಕೋಟು, ಹಾಗು ನೆತ್ತಿಯ ಮೇಲೆ ಸೂರ್ಯ ಮಾರ್ಕಿನ ಕೊಡೆ. ಜೊತೆಗೆ ದಪ್ಪನೆಯ ಪಟ್ಟಿಯ ಚಪ್ಪಲಿ. ಸಹನಾ ಕೂಡ ಮನುವನ್ನು ಕಳುಹಿಸಲು ಮನಸಿಲ್ಲದ ಮನಸಿನಲ್ಲಿ ಅಣಿಯಾಗುತ್ತಿದ್ದಳು.



ಕೊನೆಗೂ ರೈಲ್ವೇ ನಿಲ್ದಾಣ ತಲುಪಿದಾಗ ೧೦ ಘಂಟೆ. ೧೧ ರ ರೈಲಿಗೆ ಹೊರಡಬೇಕಿತ್ತು. ಭಾನುವರವಾದ್ದರಿಂದ ಹೆಚ್ಚಿಗೆ ಜನಸಂದಣಿ ಇರಲಿಲ್ಲ. ೧೦.೩೦ ಕ್ಕೆ ರೈಲು ಪ್ಲಾಟ್ ಫಾರಂಗೆ ಬಂದು ನಿಂತಿತು. ಆರಾಮ ಖುರ್ಚಿಯಲ್ಲಿ ಪ್ರಯಾಣಿಸುವ ಬೋಗಿಯೇ ದೊರಕಿತು. ಮುಖದಲ್ಲಿ ಎಷ್ಟೇ ನಗುವಿದ್ದರೂ, ಮನದೊಳಗೆ ತನ್ನವರನ್ನು, ಬಿಟ್ಟು ಹೋಗುವಾ ಸಂಕಟ ಅವನನ್ನು ಬಾದಿಸುತಿತ್ತು.

**************************************************************************************************************************************************************
ಮುಂದುವರೆಯುವುದು>>>>>>>>>>>

Saturday, February 6, 2010

ವಾಸ್ತವ

ಆಗ ತಾನೇ ಊಟ ಮುಗಿಸಿ, ತನಗೆ ಆಗದಿದ್ದರು ಅಡಿಗೆ ಮನೆಯಲ್ಲಿ ಅಡಗಿಸಿಟ್ಟಿದ್ದ ಅಡಿಕೆ ಮೆಲ್ಲುತ, ಆರಾಮ ಖುರ್ಚಿಯಲ್ಲಿ ಮಧ್ಯಾನದ ತೂಕಡಿಕೆ ಆನಂದಿಸುತ್ತಿದ್ದರು ರಾಮರಾಯರು. ಮೈಸೂರಿನ ಜಯನಗರದ ಸರ್ಕಾರೀ ಶಾಲೆಯ ಮಾಸ್ತರು. ತುಂಬ ಅನುಕೂಲಸ್ತರು ಅಲ್ಲದಿದ್ದರೂ, ಮಧ್ಯಮ ವರ್ಗದ ಕುಟುಂಬ.ತಂದೆ ರಾಜಾಶ್ರಯದಲ್ಲಿ ಇದ್ದಾಗ ಕೊಟ್ಟ ಹೆಂಚಿನ ಮನೆ. ಪತಿಗೆ ಅನುರೂಪಳಾದ ಪತ್ನಿ ಶಾರದಮ್ಮ. ಆಡಂಬರದ ಜೀವನಕ್ಕೆ ಸಲಾಂ ಹೊಡೆದು ಮನೆ ನಡೆಸುತ್ತಿರುವ ಗೃಹ ಲಕ್ಷ್ಮಿ . ಇವರ ಪ್ರೀತಿಯ ಪ್ರತೀಕವಾಗಿ ಇಬ್ಬರು ಮಕ್ಕಳು. ಮನೋಹರ ದೊಡ್ಡವ, ಎರಡನೆಯವಳು ಸಹನಾ. ಮನೋಹರ ಹೆಸರಿಗೆ ತಕ್ಕವ. ಮನೋಹರವಾಗಿಯೇ ಇರುತ್ತಾನೆ. ಶಾರದಮ್ಮನಿಗೆ ಸಹನಾದೆ ಚಿಂತೆ. ಮೊದಲ ಪಿ.ಯು.ಸಿ ವ್ಯಾಸಾಂಗ. ಆದರೂ ಬುದ್ದಿ ವಿಹಲ್ವ. ಕೊಂಚವೂ ಬದುಕಿನ ಬಗ್ಗೆ ಯೋಚನೆ ಇಲ್ಲ. ಇಂದಿನದು ಇಂದು ನಾಳೆ ನನ್ನದಲ್ಲ ಎನ್ನುವ ಭಾವ.

ಮನೋಹರ ಇವಳ ಎಲ್ಲ ಗುಣಗಳಿಗೂ ವಿರುದ್ಧ. ಒಂದು ರೀತಿ "ತತ್ಸಮ,ತಧ್ಭವ". ಎರಡು ಒಂದೇ ಆದರೂ ವಿರುದ್ಧ ದಿಕ್ಕು. ಕೊನೆಯ ವರ್ಷದ ಬಿ.ಕಾಂ. ಅಷ್ಟೇನೂ ಬುದ್ದಿವಂತನಲ್ಲದಿದ್ದರೂ ಮನೆಯ ಪರಿಸ್ಥಿತಿ ಬಲ್ಲವನಾಗಿದ್ದ. ದುಂದು ವೆಚ್ಚ ಮಾಡದೆ ಜೀವನ ದುಡಿಸುತ್ತಿದ್ದ. ಸಹನಾಳು ಅದೇ ರೀತಿ ಇದ್ದರೂ ಗೆಳತಿಯರ ಜೊತೆ ಸೇರಿದಾಗ ಬುದ್ದಿ ಸ್ವಲ್ಪ ಕೆಡುತಿತ್ತು. ಬೇಡದ ವಸ್ತುವಿಗೆ ಹಣ ಹಾಕಿ ನಂತರ ಪರಿತಪಿಸುತ್ತಿದ್ದಳು.
ಇವಿಷ್ಟೂ ಮನೆಯವರ ಪರಿಚಯ.


ಮುಂದುವರೆಯುವುದು.................................

Wednesday, February 3, 2010

ಹೊಸ ಕಾದಂಬರಿ "ವಾಸ್ತವ"

ಮರಳಿ ಗೂಡಿಗೆ
ನನ್ನದೇ ಕಲ್ಪನೆಯ ಹೊಸ ಕಾದಂಬರಿ "ವಾಸ್ತವ" ಪ್ರಕಟಿಸುತಿದ್ದೇನೆ.

ಶೀಘ್ರದಲ್ಲಿ!!!!!!!!!!!!!!!

ನಿಮ್ಮ ಪ್ರೋತ್ಸಾಹ, ಸಲಹೆ, ಸೂಚನೆ ಅವಶ್ಯ...............
ನಿಮ್ಮವ ,
ನೆನಪು ಕಿರಣ್