Saturday, April 3, 2010

ಕರೆಂಟ್ ಕಟ್, ಟೈಮ್ ಫುಲ್ ಫಿಟ್...

ಬಿಜೆಪಿ ಸರ್ಕಾರ ಬಂದಾಗಿನಿಂದ ರಾಜ್ಯದ ಜನತೆಗೆ ಕೊಟ್ಟ ಕೊಡು(ತೊಗೋ)ಗೆಗಳು ಬಹಳಷ್ಟು. ಎಲ್ಲಾ ವರ್ಗದ ಜನರಿಗೂ ಒಂದೊಂದು ಕೊಡುಗೆ. ಬಡವರು, ಶ್ರೀಮಂತರು ಎಂಬ ಭೇದವೇ ಇಲ್ಲದೇ, ಎಲ್ಲರನ್ನು ಸಮಾನವಾಗಿ ಕಾಣುತ್ತಿದ್ದಾರೆ. ಮನೆಗೆ ಹೆಣ್ಣು ಮಗು ಬೇಡ ಎನ್ನುತ್ತಿದ್ದವರಿಗೆ ಭಾಗ್ಯಲಕ್ಷ್ಮಿ ಯೋಜನೆ. ಮಗು ಹುಟ್ಟಿದ ಕ್ಷಣದಿಂದ ಮನೆಯವರಿಗೆ ಖುಷಿ.ಹದಿನೆಂಟು ವರ್ಷವಾದರಂತೂ ತುಂಬ ಖುಷಿ . ಯಾಕೆಂದರೆ, ಆ ಮಗುವಿನ ಹೆಸರಿನಲ್ಲಿ ಇಟ್ಟಿರುವ ಹಣದ ಆಯಸ್ಸು ಅಂದಿಗೆ ಮುಗಿಯುತ್ತದೆ. ಇನ್ನು ಸೈಕಲ್ ಸವಾರಿ. ಓದೋ ಹೈಕಳಿಗೆ ವ್ಯಾಯಾಮದ ಜೊತೆಗೆ, ಕಲಿಕೆಗೂ ಸಹಾಯವಾಗುವ ಸಕ್ಕತ್ ಆಫರ್. ಪಾಪ, ನಮ್ಮ ಯಡಿಯೂರಪ್ಪನವರಿಗೇನೆ ಬ್ರೇಕ್ ಇಲ್ಲದ ಸೈಕಲ್ ಕೊಟ್ಟು ಬೀಳ್ಸುದ್ರು ರೆಡ್ಡಿ ಬ್ರದರ್ಸ್. ಏನ್ ಮಾಡೋದು, ಆಪರೇಶನ್ ಯಡಿಯೂರಪ್ಪ!

ರಾಜಕೀಯದವರ ಗಿಮ್ಮಿಕ್ಕುಗಳು , ಯಾವ ಮಟ್ಟಕ್ಕಿರುತ್ತವೆ ಎಂದರೆ, ಪಕ್ಕದ ತಮಿಳುನಾಡಿನ ರಾಜಕೀಯ ಮುತ್ಸದಿ ಕರುಣಾನಿಧಿ, ಜನ ಟಿವಿಯಲ್ಲಿ ತಮ್ಮ ಬಣ್ಣದ ರಂಗಿನಾಟ ನೋಡಲೆಂದು ಬಣ್ಣದ ಟಿವಿ ಹಂಚಿದರು. ಪಾಪ ಅದೇ ಟಿವಿಯಲ್ಲಿ ಕಾಮಿ ಸ್ವಾಮೀ ನಿತ್ಯಾನಂದನ ರಾಸಲೀಲೆ ನೋಡಿ ಜನ ಖುಷ್ ಆದರು. ಇನ್ನು ಅಕ್ಕ ಮಾಯಾವತಿ, ಯಾವ ಯೋಜನೆನು ಕೊಡದೆ, ತಮಗಾಗೆ ಸಕ್ಕತ್ ರೋಕ್ಕಾನ ಬಳಸಿ ಹಾರ ಮಾಡ್ಸಿ ಹಾಕ್ಕೊಂಡ್ರು. ಈ ವಿಷಯದಲ್ಲಿ ಲಾಲು ಒಂದಷ್ಟು ಒಳ್ಳೇ ಕೆಲಸಾನೆ ಮಾಡಿದ್ರು ಎನ್ನಬೇಕು. ಸದಾ ನಷ್ಟದ ಹಳಿಯಲ್ಲಿ ಎಗ್ಗಿಲ್ಲದೆ ಸಾಗುತ್ತಿದ್ದ ರೈಲ್ವೆ ಇಲಾಖೆಯನ್ನ ಲಾಭದ ಹಳಿಗೆ ತಂದಿದ್ದು ಅವರ ಹೆಗ್ಗಳಿಕೆ.

ಈಗ ಚರ್ಚಿಸಬೇಕಾದ ವಿಷಯ ಏನೆಂದರೆ ಪವರ್ ಕಟ್. ನಮ್ಮ ರಾಜಕೀಯ ನಾಯಕರ ಪವರ್ ಕಟ್ ಅಲ್ಲ ಸ್ವಾಮೀ. ಜನಸಾಮಾನ್ಯರ ದೈನಂದಿನ ಬದುಕು ನಡೆಸಲು ಅತ್ಯವಶ್ಯವಾದ ವಿದ್ಯುತ್ಚಕ್ತಿ. ಹಿಂದೆ ಕೇವಲ ಬೇಸಿಗೆ ಶುರುವಾದ ಎರಡು ತಿಂಗಳು ಇರುತ್ತ್ತಿದ್ದ ಲೋಡ್ ಶೆಡ್ಡಿಂಗ್, ಈಗ ವರ್ಷವಿಡೀ ಇರುತ್ತದೆ. ಅದಕ್ಕೂ ಕಾಲಗಳ ಅರಿವಿಲ್ಲ. ೧ ತಾಸು ಎಂದು ಶುರುವಾಗಿ, ಈಗ ೨೫ ನೆಯ ತಾಸು ಚಾಲ್ತಿಯಲ್ಲಿ ಇರಬಹುದೇನೋ ಎನ್ನುವಷ್ಟರ ಮಟ್ಟಿಗಿರುತ್ತದೆ. ಇದು ಯಾವುದೋ ಹಳ್ಳಿ, ಅಥವಾ ಪಟ್ಟಣದ ಕಥೆಯಲ್ಲ. ಉದ್ಯಾನ ನಗರಿ, ಸಿಲಿಕಾನ್ ಸಿಟಿ, ಬೆಂಗಳೂರಿನ ಕಥೆ. ಕೆಲ ವರ್ಷಗಳ ಹಿಂದೆ ಎಸ್. ಎಂ. ಕೃಷ್ಣ ಸರಕಾರವಿದ್ದಾಗ, ಹಳ್ಳಿ ಜನರ ಬೆಳಕು ಕಿತ್ತು, ಬೆಂಗಳೂರನ್ನು ಬೆಳಗಿಸುತ್ತಿದ್ದರು. ನಂತರ ಬಂದ ರೇವಣ್ಣ, ರಾವಣನಾಗಿ, ಸಣ್ಣ ಪುಟ್ಟ ನಗರಗಳತ್ತ ಕೈ ಚಾಚಿದರು. ದಿನ ಬೆಳಗಾದರೆ, ಪತ್ರಕರ್ತರ ಏಕೈಕ ಪ್ರಶ್ನೆ, ಎಂದಿನಿಂದ ಲೋಡ್ ಶೆಡ್ಡಿಂಗ್. ಕೆಲ ದಿನ ಅವರೂ ಇಲ್ಲ, ನಮ್ಮ ಬಳಿ ಪವರ್ (?) ಇದೆ. ಯಾವುದೇ ಲೋಡ್ ಶೆಡ್ಡಿಂಗ್ ಇಲ್ಲ ಎಂದು ಸಾಗಹಾಕುತ್ತಿದ್ದರು. ಎಷ್ಟು ದಿನ ತಡೆದಾರು. ನಂತರ ಹಂತ ಹಂತವಾಗಿ ತಮ್ಮ ಕದಂಬ ಬಾಹು(ಗಳು) ವನ್ನು ಚಾಚುತ್ತ ಬಂದರು. ಇಷ್ಟಾದರೂ ಕೂಡ ಬೆಂಗಳೂರು ಬೆಚ್ಚಿರಲಿಲ್ಲ. ಯಾಕೆಂದರೆ, ಅದು ಒಂದು ರೀತಿ ಇಂದ್ರನ ಹಾಗೆ.ಸದಾ ವಿಲಾಸಿ ಜೀವನ.

ವಚನ ಭ್ರಷ್ಟ ಕುಮಾರಣ್ಣನ ಅವಧಿಯಲ್ಲೂ ಇದರ ಮುಂದುವರಿದ ಭಾಗ. ಗ್ರಾಮ ವಾಸ್ತವ್ಯ ಮಾಡಿದಾಗ ಆ ಹಳ್ಳಿಗೆ ಬೆಳಕು. ತದನಂತರ ಬಂದ ಯಡಿಯೂರಪ್ಪ, ಚುನಾವಣೆಯಲ್ಲಿ ಕೊಟ್ಟಿದ ಭರವಸೆಯಲ್ಲಿ ಪ್ರಮುಖವಾದ ೨೪ ತಾಸು ಎಲ್ಲ ಹಳ್ಳಿಗಳಿಗೂ ವಿದ್ಯುತ್ ಎಂಬ ಅಂಗೈ ಅರಮನೆ ಕಟ್ಟಲೇ ಇಲ್ಲ. ಬದಲಿಗೆ ಬರೀ ಕತ್ತಲೇ. ಇಲ್ಲಿಯವರೆಗೂ, ಹಳ್ಳಿ ಪಟ್ಟಣದ ಬೆಳಕು ಆರಿಸಿದ್ದವರನ್ನೂ ಮೀರಿಸಿ, ಬೆಂಗಳೂರಿಗೂ ತಮ್ಮ ಕಮಲವನ್ನು ಮುಡಿಸಿದರು. ಹಂತ ಹಂತವಾಗಿ ರಾಜ್ಯ ಕತ್ತಲೆಯಲ್ಲಿ ಮುಳುಗಲು ಶುರುವಾಯ್ತು.ಇಷ್ಟೆಲ್ಲಾ ಕಷ್ಟದ ಪರಿಸ್ಥಿತಿ ಇದ್ದರೂ, ಬೆಂಗಳೂರಿನಲ್ಲಿ ಹೊನಲು-ಬೆಳಕಿನ ಕ್ರಿಕೆಟ್ ಪಂದ್ಯ ಆಡಿಸಿದರು. ಹಲವು ಜನರಿಗೆ ತಿಳಿದಿಲ್ಲ. ಇಲ್ಲಿ ಬಳಸುವ ದೀಪಗಳು, ಹೆಚ್ಚಿನ ವಿದ್ಯುತ್ ಬಳಸುತ್ತವೆ ಎಂದು. ಒಂದು ಪಂದ್ಯಕ್ಕೆ ಉರಿಸುವ ಈ ದೀಪಗಳು, ಎಷ್ಟೋ ಹಳ್ಳಿಗಳನ್ನು ಹಲವಾರು ದಿನಗಳು ಬೆಳಗಬಲ್ಲದು. ರೈತನ ಪಂಪ್ ಸೆಟ್ಟಿಗೆ ಸಿಂಗಲ್ ಫೇಸ್ ವಿದ್ಯುತ್ ನೀಡಲಾಗದವರು , ಕೆಲವು ಜನರ ತೆವಲಿಗೆ ಈ ಅಮೂಲ್ಯ ಇಂಧನ ಹಾಳುಗೆಡವುತ್ತಿದ್ದಾರೆ. ತಮ್ಮ ಮುಂದಿನ ಭವಿಷ್ಯಕೆ ನಾಂದಿ ಹಾಡುವ ಎಸ್. ಎಸ್. ಎಲ್.ಸಿ ಪರೀಕ್ಷೆಗೆ ಓದುವ ಮಕ್ಕಳಿಗೆ ಕ್ಯಾಂಡಲ್ ಇಟ್ಟು, ನೀವು ವಿಶ್ವೇಶ್ವರಯ್ಯ ಆಗುತ್ತೀರಿ ಎಂದು ಗಿಂಜುತ್ತಾರೆ.

ಇಷ್ಟೆಲ್ಲಾ ಸಮಸ್ಯೆ ತಂದೊಡ್ಡಿದ ಪವರ್ ಕಟ್ , ನಮಗೆ ತಿಳಿಯದೆ ಕೆಲವೊಂದು ಅಮೂಲಾಗ್ರ ಬದಲಾವಣೆ ತಂದಿದೆ. ಎಲ್ಲ ಸರಿಯಾಗಿದ್ದ ಸಮಯದಲ್ಲಿ, ನಿತ್ಯ ಕರ್ಮ ಮುಗುಸುವುದರಿಂದ ಹಿಡಿದು, ಓಡಾಡುವ ಕೂಸು, ನಮ್ಮ ಮೊಬೈಲ್ ಬ್ಯಾಟರಿ ಛಾರ್ಜೆ ಆಗುವ ತನಕ ನಮ್ಮಲ್ಲಿ ಒಂದು ಶಿಸ್ತು ಕಲಿಸಿದೆ. ಹಿಂದೆ, ಏಳುವ ಸಮಯದಿಂದ ಹಿಡಿದು, ಸೋಮಾರಿತನ ನಮ್ಮಲ್ಲಿ ಆವರಿಸಿತ್ತು. ಈಗ ಏಳದೆ ಹೋದರೆ ವಿಧಿಯಿಲ್ಲ. ಬಿಸಿ ನೀರಿಗಾಗಿ ಬಾಯ್ಲರ್, ಬಟ್ಟೆಗೆ ಇಸ್ತ್ರಿ, ಅಡಿಗೆಗೆ ಮಿಕ್ಸಿ, ಎಲ್ಲವೂ ಪ್ರತಿದಿನ ನಮ್ಮ ಜೀವನ ಆರಾಮವಾಗಿ ನಡೆಸಲು ಇರುವ ವಸ್ತುಗಳು.ಆದರೆ ಇವನ್ನು ಉಪಯೋಗಕ್ಕಿಂತ, ದುರುಪಯೋಗ ಮಾಡಿದ್ದೇ ಹೆಚ್ಚು. ಬೇಡವೆಂದರೂ ಹೆಚ್ಚಾಗಿ ನೀರು ಕಾಯಿಸಿವುದು, ಇಸ್ತ್ರಿ ಪೆಟ್ಟಿಗೆ ಆನ್ ಮಾಡಿ, ಮೊಬೈಲ್ನಲ್ಲಿ ಮಾತಾಡುತ್ತ ಊರೆಲ್ಲ ಅಲೆದು ಬರುವುದು, ಮಿಕ್ಸಿ ಉರಿಸಿ ಪಕ್ಕದ ಮನೆ ಜಗಳ ನೋಡುವ ಕುತೂಹಲ, ಇವೆಲ್ಲಕ್ಕೂ ಈಗ ಕಡಿವಾಣ ಬಿದ್ದಿದೆ. ನಮ್ಮಲ್ಲಿ ಮಿತ ಬಳಕೆಯ ಒಂದು ಜಾಗೃತಿ ತರಿಸಿದೆ. ಇಂದು ವ್ಯರ್ಥ ಮಾಡಿದರೆ, ನಾಳೆ ನಮಗೇ ಇಲ್ಲವೆಂಬ ಸಾಮಾನ್ಯ ಜ್ಞಾನ ಕೆಲವರಲ್ಲಾದರೂ ಬಂದಿದೆ. ಸೋಮಾರಿತನಕ್ಕೆ ಚಾಟಿ ಏಟು ಕೊಟ್ಟು, ನಮ್ಮಿಂದ ಕೆಲಸ ತೆಗೆಸಿದೆ.

ಈ ಸಮಸ್ಯೆಗೆ ಖಂಡಿತ ಪರಿಹಾರವಿದೆ. ಚುನಾವಣೆಗೂ ಮೊದಲು , ಗುಜರಾತ್ ಮಾದರಿ ಸರ್ಕಾರ ಎನ್ನುತ್ತಿದ್ದ ಬಿ.ಜೆ.ಪಿ, ಅದನ್ನು ಯಾವ ಅರ್ಥದಲ್ಲಿ ಹೇಳಿತ್ತೋ ದೇವರೇ ಬಲ್ಲ. ಬರೀ ಅಭಿವೃದ್ದಿ ಮಾಡಿದ್ದೇವೆ ಎಂದು ಬೊಗಳೆ ಬಿಡುವ ಬದಲು, ನಿಜವಾದ ಅಭಿವೃದ್ದಿ ಎಂದರೆ ಏನೆಂದು ತಿಳಿಯಬೇಕು. ಈಗ್ಗೆ ಕೆಲವು ವರ್ಷಗಳ ಹಿಂದೆ ಭೂಕಂಪವಾದಾಗ ಗುಜರಾತ್ ಪರಿಸ್ಥಿತಿ ಏನೂ ಈಗಿನ ಕರ್ನಾಟಕಕ್ಕಿಂತ ಭಿನ್ನವಾಗಿರಲಿಲ್ಲ. ಇಡೀ ಅಹಮದಾಬಾದ್ ನಗರವನ್ನು ಪ್ರತಿ ರಾತ್ರಿ ಬೆಳಗುವುದು ಸೋಲಾರ್ ದೀಪವೇ ಹೊರತು, ವಿದ್ಯುತ್ ದೀಪವಲ್ಲ. ಬರೀ ಬೆಂಗಳೂರನ್ನು ಈ ರೀತಿ ಪರಿವರ್ತಿಸಿದರೆ ಸಾಕು, ಅದೆಷ್ಟೋ ದಶಲಕ್ಷ ಯುನಿಟ್ ವಿದ್ಯುತ್ ಉಳಿತಾಯವಾಗುತ್ತದೆ. ನಗರದ ಯಾವುದೇ ಬೀದಿಗೆ ಹೋದರು, ಮಧ್ಯಾನವಾದರೂ ಆರದ ಬೀದಿ ದೀಪಗಳ ಸಾಲೇ ಸಿಗುತ್ತದೆ. ಇವೆಲ್ಲವುಗಳಲ್ಲಿ ಸ್ವಯಂ ಚಾಲಿತ ಸ್ವಿಚ್ ಅಳವಡಿಸಿದರೆ ಅವಶ್ಯವಿದ್ದಾಗ ಮಾತ್ರ ಬೀದಿ ದೀಪ ಬೆಳಗುತ್ತದೆ. ಇವತ್ತಿನ ದಿನ, ಬೆಂಗಳೂರು ಕೇವಲ ಒಂದು ಮಹಾನಗರವಾಗಿರದೆ, ಬೃಹತ್ ರೀತಿಯಲ್ಲಿ ಬೆಳೆದು ನಿಂತಿದೆ. ಹಲವಾರು ಜನರ ಬದುಕಿಗೆ ಒಡಲಾಗಿ ನಿಂತಿದೆ.ಇಲ್ಲಿ ದುಡಿಯುವ ಕೈಗಳಿಂದ ಹಳ್ಳಿಯ, ಪಟ್ಟಣದ ಎಷ್ಟೋ ಜನರ ಹೊಟ್ಟೆ ತುಂಬುತ್ತಿದೆ. ಕಾಮಧೇನುವಾಗಿ ಬಂದವರನ್ನೆಲ್ಲಾ ತನ್ನ ಒಡಲೊಳಗೆ ಇಟ್ಟು ಪೋಷಿಸುತ್ತಿದೆ.ಹಾಗಂದ ಮಾತ್ರಕ್ಕೆ, ಮುಂದೆಯೂ ಹೀಗೆ ಇರುತ್ತದೆನ್ನುವುದು ಮೂರ್ಖತನ. ಪರಿಸ್ಥಿತಿ ಹೀಗೆ ಮುಂದುವರಿದರೆ, ಖಂಡಿತವಾಗಿ ಬೆಂಗಳೂರಿಗೆ ಯಾವುದೇ ಉದ್ಯಮಿ ಬರಲು ಇಚ್ಚಿಸುವುದಿಲ್ಲ. ಕೇವಲ ಒಂದು ವೀಡಿಯೊ ಕಾನ್ಫೆರೆನ್ಸ್ ನಿಂದ ಹೂಡಿಕೆದಾರರನ್ನು ಸೆಳೆಯುವ ಮೋದಿ ನಿಮಗೆ ಮಾದರಿಯಾಗಲಿ. ನ್ಯಾನೊ ಕಾರಿನ ಘಟಕ ಸ್ಥಾಪನೆಯಲ್ಲಿ ಆದ ಅನುಭವದಿಂದ ಬುದ್ಧಿ ಕಲಿಯಬೇಕು.ಯೋಜನೆ ಕರ್ನಾಟಕದ ಕೈ ತಪ್ಪಲು, ಪ್ರಮುಖ ಕಾರಣ ವಿದ್ಯುತ್. ಯಾವುದೇ ಉದ್ಯಮಿ ಸದಾಕಾಲ ಡೀಸಲ್ ಬಳಸಿ ತನ್ನ ಸಂಸ್ಥೆ ನಡೆಸಲು ಇಚ್ಚಿಸುವುದಿಲ್ಲ. ಇತ್ತೀಚಿಗೆ ಮಾನ್ಯ ಮುಖ್ಯಮಂತ್ರಿಗಳು ಮುಂಬೈನಲ್ಲಿ ಹೂಡಿಕೆದಾರರ ಸಮ್ಮೇಳನ ನಡೆಸಿ ಮಿಂಚಿದ್ದಾರೆ. ಇದು ಸ್ವಾಗತಾರ್ಹ ಬೆಳವಣಿಗೆ. ಮೂಲಭೂತ ಸೌಕರ್ಯಕ್ಕೆ ಯಾವುದೇ ಕೊರತೆ ಇಲ್ಲ ಎಂದು ಹೇಳಿದ್ದೀರ. ಆದರೆ, ನೀವು ಕೊಟ್ಟ ಮಾತು ಉಳಿಸಿಕೊಳ್ಳುವಿರೆಂದು ರಾಜ್ಯದ ಜನತೆಗೆ ಅನುಮಾನ. ಒಂದಂತೂ ನಿಜ. ಪರಿಸ್ಥಿತಿ ಹೀಗೆ ಮುಂದುವರಿದರೆ, ಕರ್ನಾಟಕ ಗುಜರಾತ್ ಮದರಿಯಲ್ಲಾ, ಬಿಹಾರ ಮಾದರಿಯಾದೀತು. ಹೊಸ ಹೂಡಿಕೆದಾರರ ಬದಲು, ಇರುವ ಗಳಿಕೆಯನ್ನೂ ಕಳೆದುಕೊಳ್ಳಬೇಕಾಗಬಹುದು. ಆಗ ವಚನಭ್ರಷ್ಟರೆಂದು ಯಾರನ್ನು ಹಳಿದು, ಅಧಿಕಾರಕ್ಕೆ ಬಂದಿರೋ, ಅವರ ಗತಿಯೇ ನಿಮಗೂ ಕೂಡ. ಮುಂದಿನ ವರುಷಕ್ಕಾದರೂ ಕರ್ನಾಟಕ ಬೆಳಗಲಿ..

ಪ್ಲೀಸ್ ಉತ್ತರಿಸಿ..ಯಡಿಯೂರಪ್ಪ & ಈಶ್ವರಪ್ಪ.


ಗಣೇಶ್ ಕಿರಣ್, ಮೈಸೂರು